ಪೃಥ್ವೀರಾಜ ಕಪೂರ್
1906-1972. ಹಿಂದಿ ಚಿತ್ರರಂಗದ ನಟ. ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ವಿಜೇತರು. 1906 ನವೆಂಬರ್ 3 ರಂದು ಈಗ ಪಾಕಿಸ್ಥಾನದಲ್ಲಿರುವ ಪೆಷಾವರಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಮೂರು ವರ್ಷದವನಾಗಿದ್ದಾಗಲೇ ತಾಯಿ ತೀರಿಕೊಂಡ ಮೇಲೆ ತಾತಾ ದಿವಾನ್ ಸಾಹೇಬ್ ಕೇಶುಮಲ್ ಕಪೂರರ ಆಶ್ರಯದಲ್ಲಿದ್ದು, ಅವರ ಪ್ರಭಾವದಲ್ಲಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಚಿತ್ರಜಗತ್ತಿನಲ್ಲಿ ಮುಂದೆ ಪಾಪಾಜಿ ಎಂದು ಖ್ಯಾತರಾದ ಇವರು ಎಂಟನೆಯ ವಯಸ್ಸಿನಲ್ಲಿಯೇ ಸಮುನಾರಿ ಊರಿನ ಶಾಲೆಯಲ್ಲಿ ರಾಮಾಯಣಾಧಾರಿತ ನಾಟಕದಲ್ಲಿ ಲಕ್ಷ್ಮಣನ ಪಾತ್ರ ವಹಿಸಿ ಅಭಿನಯ ಪ್ರತಿಭೆಯನ್ನು ಮೆರೆದರು. 16ನೆಯ ವಯಸ್ಸಿನಲ್ಲಿ ಲ್ಯಾಲ್‍ಪುರ್ ಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ, ಪೆಷಾವರಿನ ಎಡ್ವರ್ಡ್ ಕಾಲೇಜನ್ನು ಸೇರಿದರು (1922). ಆ ಕಾಲೇಜಿನ ನಾಟಕ ಸಂಘದ ಮುಖ್ಯಸ್ಥರಾದ ಜಯದಯಾಳ್ ಇವರ ಪ್ರತಿಭೆಯನ್ನು ಗುರುತಿಸಿ ಪೋಷಿಸಿದರು. 1927ರಲ್ಲಿ ಪದವಿ ಪಡೆದು ಕಾನೂನು ಕಲಿಯಲು ತೊಡಗಿದರಾದರೂ ಯಶಸ್ವಿಯಾಗಲಿಲ್ಲ. ಅಭಿನಯವನ್ನೇ ವೃತ್ತಿಯನ್ನಾಗಿಸಿಕೊಳ್ಳಲು ಬಯಸಿ ಲಾಹೋರಿಗೆ ಬಂದು ಅಲ್ಲಿಂದ ಕಲ್ಕತ್ತೆಗೆ ಸಾಗಿ ಅಲ್ಲಿಂದ ಮುಂಬಯಿಗೆ ಬಂದರು. 1929ರಲ್ಲಿ ಆರ್ದೇಶಿರ್ ಇರಾನಿಯವರ ಇಂಪೀರಿಯಲ್ ಫಿಲ್ಮ್ ಕಂಪನಿ ತಯಾರಿಸಿದ ಚಾಲೆಂಜ್‍ನಲ್ಲಿ ಎಕ್ಸ್‍ಟ್ರಾ ನಟನಾಗಿ ಕಾಣಿಸಿಕೊಂಡ. ಆ ಕಾಲದ ಪ್ರಸಿದ್ಧ ತಾರೆ ಎರ್ಮಾಲೀನಳ ಎದುರು ನಾಯಕನಾಗಿ ಸಿನಿಮಾ ಗರ್ಲ್‍ನಲ್ಲಿ ನಟಿಸಿದ (1930). 1929 ರಿಂದ 31ರವರೆಗೆ 9 ಮೂಕ ಚಿತ್ರಗಳಲ್ಲಿ ಅಭಿನಯಿಸಿದ. 1931ರಲ್ಲಿ ತಯಾರಾದ ಭಾರತದ ಪ್ರಥಮ ವಾಕ್ ಚಿತ್ರ ಆಲಂ ಆರಾದಲ್ಲಿ ಅಭಿನಯಿಸಿದ ಕೀರ್ತಿ ಇವರದು.

1932ರಲ್ಲಿ ಷೇಕ್‍ಸ್ಪಿಯರ್ ನಾಟಕ ನಿರ್ಮಾತೃ ಗ್ರಾಂಟ್ ಆ್ಯಂಡರ್‍ಸನ್ನರ ಸಂಪರ್ಕಕ್ಕೆ ಬಂದರು. ಇಬ್ಬರೂ ಸೇರಿ ಭಾರತಾದ್ಯಂತ ಸಂಚರಿಸಿ 14 ನಾಟಕಗಳನ್ನು ಪ್ರದರ್ಶಿಸಿದರು. ಮೃಚ್ಚಕಟಿಕದ ಚಾರುದತ್ತನ ಪಾತ್ರ ಇವರದು. ಈ ಅವಧಿಯಲ್ಲಿ ರಂಗಭೂಮಿ - ಚಿತ್ರರಂಗ ಎರಡು ಕಡೆಗಳಲ್ಲಿ ಅಭಿನಯಿಸುತ್ತಿದ್ದರು. ಮೂವತ್ತರ ದಶಕದಲ್ಲಿ ಕಲ್ಕತ್ತಾದಲ್ಲಿದ್ದ ಆರು ವರ್ಷಗಳ ಅವಧಿಯಲ್ಲಿ ನ್ಯೂ ಥಿಯೇಟರ್ಸ್‍ಗೆ ಕೆಲಸ ಮಾಡಿ ರಾಜಾರಾಣಿ, ಮೀರಾ (1933), ಸೀತಾ (1934), ಮಂಜಿಲ್ (1936), ವಿದ್ಯಾಪತಿ (1937), ದುಷ್ಮನ್ (1939) ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು. ಖ್ಯಾತ ಗಾಯಕನಟ ಕುಂದನ್‍ಲಾಲ್ ಸೈಗಾಲರ ಇವರ ಸಹನಟನಾಗಿದ್ದರು ಇವನದು. 1939ರಲ್ಲಿ ಮುಂಬಯಿಗೆ ಮತ್ತೆ ತೆರಳಿ ಚಂದೂಲಾಲ್ ಷಾ ರ ರಣಜಿತ್ ಮೂವಿಟೋನ್ ಸೇರಿ 1943ರವರೆಗೆ ಅಲ್ಲಿ ದುಡಿದರು. ಪಾಗಲ್, ಆಜ್ ಕ ಹಿಂದೂಸ್ಥಾನ್ (1940), ಗೌರಿ, ವಿóಷಕನ್ಯಾ (1943) ಮೊದಲಾದವು ಆಗಿನ ಚಿತ್ರಗಳು. ಸೊಹ್ರಾಬ್ ಮೋದಿಯವರ ಸಿಕಂದರ್ (1941) ಚಿತ್ರದಿಂದ ಇವರ ಖ್ಯಾತಿ ಹೆಚ್ಚಿತು. ರಾಜನರ್ತಕಿ (1941) ಏಕ್ ರಾತ್ (1942), ಉಜಾಲ (1942), ಆಂಖೆ ಕಿ ಶರಮ್ (1943) ಇಷಾರ (1943) ಮೊದಲಾದವೂ ಹೆಸರು ತಂದವು. ಇವರ ಅಭಿನಯದ ಕೋರ್ಟ್ ಡ್ಯಾನ್ಸರ್ (ರಾಜನರ್ತಕಿ) ಎಂಬ ಚಿತ್ರ ಅಮೆರಿಕಕ್ಕೆ ಹೋಯಿತು. ಇಂಗ್ಲಿಷ್ ಸಂಭಾಷಣೆ ಸಹಿತ ಚಿತ್ರಿತ ಮೊದಲ ಭಾರತೀಯ ಚಿತ್ರವಿದು.

ತನ್ನ ಚಿತ್ರಜೀವನದಲ್ಲಿ 9 ಮೂಕ ಚಿತ್ರಗಳಲ್ಲದೆ 91 ಟಾಕಿ ಚಿತ್ರಗಳಲ್ಲಿ ಈತ ಅಭಿನಯಿಸಿದ್ದಾರೆ. ಇವರ ಅಭಿನಯದ ಪ್ರತಿಭೆಯ ಪರಿಪೂರ್ಣ ರೂಪದಾಣಬೇಕೆಂದರೆ ಕೆ. ಅಸೀಫರ ಮುಗಲ್ - ಎ - ಅಜಂ (1960) ಚಿತ್ರದಲ್ಲಿನ ಅಕ್ಬರನ ಪಾತ್ರ ಮತ್ತು ರುಸ್ತುಂ ಸೊಹ್ರಾಬ್ (1963), ಸಿಕಂದರ್ - ಎ - ಅಜಂ (1965), ನಯಿ ಜಿಂದಗಿ (1969), ನಾನಕ್ ನಾಮ್ ಜಹಜ್ ಹೈ (1971) ನಾಗಪಂಚಮಿ (1972) - ಇವು ಇವರ ಕೊನೆಗಾಲದ ಕೆಲವು ಚಿತ್ರಗಳು. ಕನ್ನಡ ಚಿತ್ರ ಸಾಕ್ಷಾತ್ಕಾರದಲ್ಲಿಯೂ ಕಾಣಿಸಿಕೊಂಡಿದ್ದಾರೆ. 

ಮಾನವ ಸಂವೇದನೆಗಳ ಅಭಿವ್ಯಕ್ತಿಗೆ ನಾಟಕ ರಂಗವೇ ಶ್ರೇಷ್ಠ ಎಂದು ಭಾವಿಸಿ ಇವರು 1944 ಜನವರಿ 15ರಲ್ಲಿ ಪೃಥ್ವೀ ಥಿಯೇಟರ್ ಎಂಬ ಸ್ವಂತ ನಾಟಕ ಕಂಪನಿ ಕಟ್ಟಿದರು. ಭಾರತದಲ್ಲಿ ಹಿಂದೂಸ್ಥಾನಿ ರಂಗಭೂಮಿಯ ಪುನರುತ್ಥಾನಗೊಳಿಸಿದ ಈ ಕಂಪನಿ ಹಿಂದಿಯ ಪ್ರಥಮ ವೃತ್ತಿರಂಗ ಸಂಸ್ಥೆ. 16 ವರ್ಷಗಳು ಕಾಲ ಅಸ್ತಿತ್ವದಲ್ಲಿದ್ದ ಈ ಸಂಸ್ಥೆ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸುವ ನಾಟಕಗಳನ್ನು ನಾಡಿನಾದ್ಯಂತ ಪ್ರದರ್ಶಿಸಿತು. ಶಾಕುಂತಲಾ, ಪಠಾನ್, ಗದ್ದಾರ್, ದೀವಾರ್, ಆಹುತಿ, ಕಲಾಕಾರ್, ಪೈಸಾ, ಕಿಸಾನ್ - ಇವು ಪ್ರಮುಖ ನಾಟಕಗಳು. 5,982 ದಿನಗಳ ಕಾಲ ಸಂಚರಿಸಿದ ಈ ಸಂಸ್ಥೆ 130 ನಗರಗಳಲ್ಲಿ ಒಟ್ಟು 2,662 ಪ್ರದರ್ಶನಗಳನ್ನು ನೀಡಿತು. ಪ್ರತಿಯೊಂದು ಪ್ರದರ್ಶನದಲ್ಲಿಯೂ ಇವರು ಅಭಿನಯಿಸಿದ್ದರು. ಇವರ ಪೃಥ್ವೀ ಥಿಯೇಟರ್ಸ್ ಭಾರತೀಯ ಚಿತ್ರರಂಗಕ್ಕೆ ಪ್ರತಿಭಾವಂತ ಕಲಾವಿದರನ್ನು ನೀಡಿದೆ. 

1923 ಡಿಸೆಂಬರ್ 10 ರಂದು ಮದುವೆಯಾದರು. ಇವರ ಪತ್ನಿ ರಮಾದೇವಿ. ಇವರ ಕುಟುಂಬ ಭಾರತದ ಸಿನಿಮಾ ಇತಿಹಾಸದಲ್ಲಿಯೇ ವಿಶಿಷ್ಟವಾದ್ದು. ರಾಜಕಪೂರ್, ಶಮ್ಮೀಕಪೂರ್, ಶಶಿಕಪೂರ್ - ಈ ಮೂವರು ಗಂಡುಮಕ್ಕಳೂ ಖ್ಯಾತ ನಟರು. ಮೊದಲ ಮಗ ಪ್ರಸಿದ್ಧ ನಿರ್ಮಾಪಕ ಹಾಗೂ ನಿರ್ದೇಶಕನಾಗಿರುವುದಲ್ಲದೆ, ಪ್ರಸಿದ್ಧ ಅರ್.ಕೆ. ಸ್ಟುಡಿಯೋದ ಒಡೆಯ. ಇವರ ಮೊಮ್ಮಕ್ಕಳಾದ ರಣಧೀರ್ ಕಪೂರ್ ಹಾಗೂ ರಿಷಿಕಪೂರ್ ಕರೀಷ್ಮಾ ಕಪೂರ್ ಕೂಡ ಪ್ರತಿಭಾವಂತ ನಟರು. ರಣಧೀರ್ ನಿರ್ದೇಶಿಸಿರುವ ಕಲ್ ಅಜ್ ಔರ್ ಕಲ್‍ನಲ್ಲಿ (1971) ಮೂರು ಕಪೂರ್ ತಲೆಮಾರಿನ ನಟರೂ ಅಭಿನಯಿಸಿದ್ದಾರೆ. 

ಈತ ರಾಜಕೀಯದಲ್ಲಿಯೂ ಅಭಿರುಚಿ ಹೊಂದಿದ್ದು ಎರಡು ಬಾರಿ ರಾಜ್ಯಸಭೆಗೆ ಸದಸ್ಯರಾಗಿ ನಾಮಕರಣಗೊಂಡಿದ್ದರು (1952-60). ಅಲ್ಲದೆ, ಕಾರ್ಮಿಕ ಸಂಘಟನೆಯಲ್ಲಿಯೂ ಆಸಕ್ತಿ ವಹಿಸಿದ್ದು ಕೇಂದ್ರ ರೈಲ್ವೆ ಕಾರ್ಮಿಕರ ಸಂಘಕ್ಕೆ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ವಿಪುಲ ಪ್ರವಾಸ ಮಾಡಿರುವ ಇವರು 1951ರಲ್ಲಿ ವಿಯನ್ನಾದಲ್ಲಿ ನಡೆದ ಕಾರ್ಮಿಕ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 1955ರಲ್ಲಿ ಚೀನಕ್ಕೆ ಹೋಗಿದ್ದರು. ಭಾರತೀಯ ಚಲನಚಿತ್ರ ನಿಯೋಗದ ಮುಖ್ಯಸ್ಥರಾಗಿ 1956ರಲ್ಲಿ ಆಗ್ನೇಯ ಏಷ್ಯಾರಾಷ್ಟ್ರಗಳಿಗೆ ಸಾಂಸ್ಕøತಿಕ ನಿಯೋಗಗಳನ್ನು ಕರೆದೊಯ್ದಿದ್ದರು. 1962ರ ಬರ್ಲಿನ್ ಚಿತ್ರೋತ್ಸವದಲ್ಲಿ ಪಾಲುಗೊಂಡಿದ್ದರು. ಇವರ ಕಲಾಸೇವೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳು ಮಾನ್ಯತೆಗೆ ಪಾತ್ರವಾಗಿ ಹಲವಾರು ಪ್ರಶಸ್ತಿಗಳು ಇವರಿಗೆ ದೊರಕಿದುವು. ಅಲಹಾಬಾದಿನಲ್ಲಿ ನಾಟ್ಯಾಚಾರ್ಯ ಬಿರುದು ನೀಡಲಾಯಿತು. (1963). ಇವರ ಸೃಜನಾತ್ಮಕ ಪ್ರತಿಭೆಗಾಗಿ ಹೊರತಂದ ಒಂದು ಸಂಭಾವನಾ ಗ್ರಂಥವನ್ನು ಡಾ|| ರಾಧಾಕೃಷ್ಣನ್ ಅದೇ ವರ್ಷ ಬಿಡುಗಡೆ ಮಾಡಿದರು. ಭಾರತದ ಸಂಗೀತ ನಾಟಕ ಅಕಾಡೆಮಿ ಫೆಲೊಷಿಪ್ ನೀಡಿ ಗೌರವಿಸಿದೆ. ಜೆಕೊಸ್ಲೊವಾಕಿಯಾದ ಕಲೆ ಮತ್ತು ಸಂಗೀತದ ರಾಷ್ಟ್ರೀಯ ಅಕಾಡೆಮಿ ಆಸ್ಮಾನ್ ಮಹಲ್ (1965) ಚಿತ್ರದಲ್ಲಿನ ಇವರ ಪಾತ್ರಕ್ಕೆ ವಿಶೇಷ ಪ್ರಶಸ್ತಿ ನೀಡಿತು. ಪದ್ಮಶ್ರೀಯನ್ನು ಪಡೆದಿದ್ದ ಇವರಿಗೆ 1969ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ಸಂದಿತು. ಭಾರತೀಯ ಚಿತ್ರರಂಗದ ಉಚ್ಛ್ರಾಯಕ್ಕೆ ಇವರ ಕೊಡುಗೆ ಗಮನಿಸಿ ಭಾರತ ಸರ್ಕಾರ 1972ರಲ್ಲಿ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ತನ್ನ 66ನೆಯ ವಯಸ್ಸಿನಲ್ಲಿ 1972ರ ಮೇ 29 ರಂದು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಈತ ನಿಧನರಾದರು.
								 			 (ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ